ಭಂಗಾಸ್ವನ
	ಒಬ್ಬ ರಾಜರ್ಷಿ. ಪುತ್ರಸಂತಾನಾರ್ಥವಾಗಿ ಯಜ್ಞಮಾಡಿ ನೂರು ಮಂದಿ ಮಕ್ಕಳನ್ನು ಪಡೆದ. ಈತ ಯಜ್ಞಮಾಡಿದ್ದನ್ನು ಕಂಡು ಇಂದ್ರನಿಗೆ ಅಸೂಯೆ ಹುಟ್ಟಿತು. ಒಮ್ಮೆ ಈತ ಕಾಡಿಗೆ ಹೋಗಿದ್ದಾಗ, ಅಸೂಯಾಗ್ರಸ್ತನಾದ ಇಂದ್ರ ಈತನನ್ನು ಮರುಳುಗೊಳಿಸಿದ. ಬಾಯಾರಿಕೆಯಿಂದ ಭಂಗಾಸ್ವನ ನೀರು ಕುಡಿಯಲು ಒಂದು ಕೊಳದಲ್ಲಿ ಇಳಿದು ಮೇಲೇಳುವಾಗ ಸುಂದರ ಕನ್ಯೆಯ ರೂಪುತಳೆದ. ಇದರಿಂದ ಖಿನ್ನನಾದ ಭಂಗಾಸ್ವನ ಅಲ್ಲಿಯೇ ಒಬ್ಬ ಮುನಿಯನ್ನು ವಿವಾಹವಾಗಿ ಅನೇಕ ಮಕ್ಕಳನ್ನು ಪಡೆದು ಆ ಮಕ್ಕಳನ್ನೆಲ್ಲ ತನ್ನ ಪಟ್ಟಣಕ್ಕೆ ಕಳುಹಿಸಿದ. ತಾನು ಗಂಡಸಾಗಿದ್ದಾಗ ಪಡೆದ ಮಕ್ಕಳೂ ಈ ಮಕ್ಕಳೊಂದಿಗೆ ಕಲೆತು ಅನ್ಯೋನ್ಯವಾಗಿದ್ದರು. ಇದನ್ನು ಸಹಿಸದ ಇಂದ್ರ ಭಂಗಾಸ್ವನನ ಮೊದಲ ಮಕ್ಕಳಿಗೂ ಆತ ಸ್ತ್ರೀಯಾಗಿದ್ದಾಗ ಪಡೆದ ಮಕ್ಕಳಿಗೂ ಕಲಹವುಂಟಾಗುವಂತೆ ಮಾಡಿದ. ಪರಸ್ಪರ ಹೊಡೆದಾಡಿಕೊಂಡು, ಎಲ್ಲ ಮಕ್ಕಳೂ ಸತ್ತಾಗ ಶೋಕಿಸುತ್ತಿದ್ದ ಮುನಿಪತ್ನಿಯಲ್ಲಿಗೆ, ಬ್ರಾಹ್ಮಣನ ರೂಪ ತಾಳಿ ಬಂದ ಇಂದ್ರ ದುಃಖದ ಕಾರಣ ಕೇಳಿದಾಗ ಹೆಂಗಸಾಗಿದ್ದ ಭಂಗಾಸ್ವನ ತನ್ನ ಮಕ್ಕಳನ್ನು ಬದುಕಿಸುವಂತೆ ಪ್ರಾರ್ಥಿಸಿದ. ಯಾವ ಮಕ್ಕಳನ್ನು ಬದುಕಿಸಿ ಕೊಡಬೇಕೆಂದು ಇಂದ್ರ ಕೇಳಿದಾಗ, ಗಂಡಸರಿಗಿಂತ ಹೆಂಗಸರಿಗೇ ಮಕ್ಕಳ ಮೇಲೆ ಹೆಚ್ಚು ವಾತ್ಸಲ್ಯವಾದ್ದರಿಂದ ತಾನು ಸ್ತ್ರೀಯಾಗಿದ್ದಾಗ ಪಡೆದ ಮಕ್ಕಳನ್ನೇ ಬದುಕಿಸಬೇಕೆಂದು ಕೋರಿದ. ಆಗ ಇಂದ್ರ ಪ್ರತ್ಯಕ್ಷನಾಗಿ ಎಲ್ಲ ಮಕ್ಕಳಿಗೂ ಪ್ರಾಣದಾನ ಮಾಡಿದವಲ್ಲದೆ ಭಂಗಾಸ್ವನನಿಗೆ ಪುರುಷತ್ವವನ್ನು ಅನುಗ್ರಹಿಸಿದ. ಆದರೆ ಸ್ತ್ರೀಯಾಗಿಯೇ ಇರುವುದು ಸುಖವೆಂದು ಭಾವಿಸಿದ ಭಂಗಾಸ್ವನ ಪುರುಷತ್ವವನ್ನು ನಿರಾಕರಿಸಿ ಸ್ತ್ರೀಯಾಗಿಯೇ ಉಳಿಯಲು ತೀರ್ಮಾನಿಸಿದ. ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುವ ಒಂದು ಪ್ರಸಂಗ.
(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ